18.3.16

ಹಾಡಿದೆ ಮನ ಮರೆತ ಹಾಡೊಂದನ್ನು



ಹಾಡಿದೆ ಮನ ಮರೆತ ಹಾಡೊಂದನ್ನು
ಕಾಡಿದೆ ದಿನ ಕಳೆದ ದಿನಗಳನ್ನು

ಬರುವೆನೆoದನೇ ಬಾರದ ವಸಂತ?
ಚಿಗುರುವೆನೆoದಳೇ ಸೋಗಿನ ಚೈತ್ರ?
ಸಾಗಿದೆ ಜೀವನ ಪಯಣ
ನೆನಪುಗಳ ಋತುಮಾನದಲಿ
ಕನಸುಗಳ ಯಾನದಲಿ

ತಂಪನೆರೆವನೇ ಬೆಳಕಿನ ಚಂದ್ರ?
ಕಂಪನೆರೆವಳೇ ಕೆಂಪಿನ ಕಮಲ?
ಸಾಗಿದೆ ಜೀವನ ಜಾತ್ರೆ
ನೆನಪುಗಳ ಬೆಳಕಿನಲಿ
ಕನಸುಗಳ ಕಂಪಿನಲಿ

ಹಾಡಿದೆ ಮನ ಮರೆತ ಹಾಡೊಂದನ್ನು
ಕಾಡಿದೆ ದಿನ ಕಳೆದ ದಿನಗಳನ್ನು


18.12.14

ಹೀಗೇತಕೆ ಈ ದಿನ?

ಹೀಗೇತಕೆ ಈ ದಿನ
ಮನದೊಲ್ಲೊಂದು ಕದನ?

ಇಲ್ಲದುದಕೆ ಹುಡುಕಾಟ
ಇತ್ತೆಂಬ ಭ್ರಮೆ ಆಟ

ಇದ್ದುದು ಮಿಥ್ಯ
ಇಲ್ಲದುದು ಸತ್ಯ

ಮಿಥ್ಯದ ಸಿಹಿ
ಸತ್ಯದ ಕಹಿ

ಒಪ್ಪದೀ ಮನ ಈ ದಿನ
ನಡೆದಿದೆ ನಿರಂತರ ಕದನ

ಹೀಗೇತಕೆ ಈ ದಿನ?

12.4.11

ಮತ್ತೆ ಮರುಕಳಿಸಿದೆ ಮೌನ

ಮತ್ತೆ ಮರುಕಳಿಸಿದೆ ಮೌನ
ಮನ ದಣಿಸುವ ದುಮ್ಮಾನ

ಬೆಳಕು ಕತ್ತಲೆಗಳ ಕಾದಾಟ
ಇರುಳು ಹಗಲುಗಳ ಪರದಾಟ

ಇರುವುದೇ ಹೊಸದೊಂದು ಲೋಕ
ಮತ್ತೊಮ್ಮೆ ಬದುಕಲು ಹೊಸ ಬದುಕ?




12.7.10

ಕಾಲ ಉರುಳುತಿದೆ... ನೀನಿರು ಇಲ್ಲದಿರು

ನೋವಿಂದ ನಲುಗಿದೆ ತನು, ಮನ
ಕಾಣದ ಕೈ ಅರಸಿದೆ ಮನ ದಿನ

ಬರೆಯಲೇನು ಪದಗಳಿಲ್ಲದ ಕಥೆಯ
ಹಾಡಲೇನು ರಾಗತಾಳವಿಲ್ಲದ ಕವಿತೆಯ

ಕೆಳಲಾರು ನಿತ್ಯ ಮಡಿವ ದನಿಯ
ಹೇಳಲೇಕೆ ಬೇಡದವಗೆ ಸಾಂತ್ವನ ನುಡಿಯ

ಕಾಲ ಉರುಳುತಿದೆ... ನೀನಿರು ಇಲ್ಲದಿರು
ಲೋಕ ನಡೆಯುತಿದೆ... ನೀನಿರು ಇಲ್ಲದಿರು

22.1.09

ಆರದಿರು ಎಲೆ ಹಣತೆ

ಆರದಿರು ಎಲೆ ಹಣತೆ
ಗಾಳಿ ಇರದು ಮುಂದೊಂದು ದಿನ

ಕುಗ್ಗದಿರು ಓ ಮನವೆ
ನಲಿವೆ ನೀನೊಂದು ದಿನ

ನಲುಗದಿರು ಓ ನಗುವೆ
ದುಃಖ ಇರುವುದು ಕೆಲವೆ ದಿನ

3.7.08

ಕಳೆದು ಹೋದೆವು ಮತ್ತೆ

ಕಳೆದು ಹೋದೆವು ಮತ್ತೆ
ಬದುಕಿನ ಆಗು ಹೋಗುಗಳ ನಡುವೆ

ಕಾಣದಾದವು ನಾವಿಟ್ಟ ಮೊದಲ ಹೆಜ್ಜೆಗಳು
ಜೀವನದ ಕಡಲ ಅಲೆಗಳ ಮೊರೆತಗಳಲ್ಲಿ

ಭಾರವೆನಿಸಿದೆ ಮನಸು ನೆನಪುಗಳ ನೆನಪಿನಲಿ
ಬೇಡವೆನಿಸಿದೆ ಈ ಜೀವವಿಲ್ಲದ ಜೀವನ...

10.1.08

ಕಲ್ಲ ಕರಗಿಸುವುದೈ ಮಧುರ ನಾದ

ಕಲ್ಲ ಕರಗಿಸುವುದೈ
ಮಧುರ ನಾದ
ಸೊಲ್ಲ ಅಡಗಿಸುವುದೈ
ಸವಿಯಾದ ಪದ

ಸಕ್ಕರೆಯ ಮೆಲ್ಲುವಿರಿ
ಪಾಡಿ ಸವಿ ನುಡಿಯ
ಸಮರಸದ ಸವಿಕಾಣುವಿರಿ
ಅಲಿಸಿ ಸರಿಗಮದ ಮೋಡಿಯ

ಸಾಗಲಿ ಜೀವನದ ಕಡು ಪಯಣ
ರಾಗದಲೆಗಳ ಮೇಲೆ
ನಾದ ತಂಗಾಳಿಯ ತಕ್ಕೆಯಲಿ
ಪದನಕ್ಷತ್ರಗಳ ದಾರಿಯಲ