27.8.07

ಹೂವೆ ನಿನ್ನ ನಗುವ ನೋಡೆ

ಹೂವೆ ನಿನ್ನ ನಗುವ ನೋಡೆ ಅನಿಸಿತು
ನಮ್ಮ ನಗುವಿನಲಿ ಜೀವ ಇಲ್ಲವೆಂದು

ಹಕ್ಕಿಯೆ ನಿನ್ನ ದನಿ ಕೀಳಿ ಅನಿಸಿತು
ನಮ್ಮ ಮಾತಲಿ ಸಿಹಿ ಇಲ್ಲವೆಂದು

ಮಗುವೆ ನಿನ್ನ ತೊದಲ ಕೇಳಿ ಅನಿಸಿತು
ನಮ್ಮ ನುಡಿಯಲಿ ಸತ್ಯ ಇಲ್ಲವೆಂದು

ನೇಸರವೆ ನಿನ್ನ ಮಡಿಲಲ್ಲಿ ಅನಿಸಿತು
ನಮ್ಮ ಮನದಲಿ ಸ್ವಾರ್ಥ ತುಂಬಿದೆಯಂದು

ಜೀವನವೆ ನಿನ್ನ ಹಿಂದಿರುಗಿ ನೋಡೆ ಅನಿಸಿತು
ನಮ್ಮ ಮನದಲೂ...
ಹೂವು ಅರಳಬಹುದಿತ್ತೆಂದು
ಮಗುವಿನ ನಗು ನಲಿಯಬಹುದಿತ್ತೆಂದು
ಎಲ್ಲರ ಪ್ರೀತಿಸಬಹುದಿತ್ತೆಂದು

22.8.07

ಈ ಜಗದ ಪರಿ

ಕಡಲಿನಾಳವ ಅರಿತವರಾರು
ಈ ಜಗದ ಪರಿಯ ಬಲ್ಲವರಾರು

ಇದ್ದವಗೆ ಬಿರುದು ಸನ್ಮಾನ
ಇಲ್ಲದವಗೆ ಬೇಗೆಯ ಬಹುಮಾನ

ದ್ವೇಷ ಅಸೂಯೆಗಳ ತಾಂಡವ
ಮೋಸ ಮತ್ಸರಗಳ ಪರ್ವ

ಕೊಟ್ಟೇಕೆ ಕಪಟಿಗೆ ನಗುವ ಮುಖವ?
ಹಾಲು ಮನಸ್ಸಿಗೆ ಕುರುಡು ಹ್ರದಯವ?

ಹೇಳಲೊಲ್ಲೆ ನಾ ನಿನಗೆ ಜಯವ
ತಂದೆ ನಮಗೇಕೆ ಈ ನರಕವ?

21.8.07

ದಿಕ್ಕಿಲ್ಲದ ಪಯಣ

ಭಾರದ ಹೃದಯ
ನಿರ್ಬಲ ತೋಳುಗಳು
ಎದೆಯ ಕಟ್ಟೆಯೊಡೆದು
ಧುಮಕಲು ಕಾದಿರುವ ಹನಿಗಳು

ಎಲ್ಲಿ ಎಡವಿದೆನೋ
ಎಲ್ಲಿಗೆ ಓಡುವೆನೋ

ಮುಳುಗಿದ ಆ ಸೂರ್ಯನನ್ನರಸಿ,
ಮತ್ತೆ ಮೂಡುವನೆಂದೆನಿಸಿ,
ಸಾಗಿದೆ ದಿಕ್ಕಿಲ್ಲದ ಪಯಣ, ಜೀವನ...

ಬದುಕು

ಕಾಣದ ಕೈಯ ನಡೆಯಾಟ
ಈ ಬದುಕಿನ ಚದುರಂಗದಾಟ
ತಪ್ಪಿದ ನಡೆ, ಕಡಿಯುವುದು ಆ ಕೈಯಲ್ಲ,
ನನ್ನ ತಲೆ... ಅದಕ್ಕೇನು ಬೆಲೆ?